Tuesday, November 12, 2013

ನನ್ನ ಕವನ....

ನಾನು ಈ ರಜೆಯಲ್ಲಿ ಒಂದು ಕವನ ಬರೆದೆ. ಅದು ನಮ್ಮ ಕರ್ನಾಟಕದ ಬಗ್ಗೆ.  ನಮ್ಮ ಪಾಠದಲ್ಲಿ ವ್ಯಾಕರಣದಲ್ಲಿ ಷಟ್ಪದಿಯ ಬಗ್ಗೆ ಇತ್ತು. ಆದ್ದರಿಂದ ನಾನು ಭಾಮಿನಿ ಷಟ್ಪದಿಯಲ್ಲಿ , ಆದಿ ಪ್ರಾಸದೊಂದಿಗೆ ಈ ಕವನ ಬರೆದಿದ್ದೇನೆ.


  ಕನ್ನಡನಾಡು ನಮ್ಮ ನಾಡದು
      ರನ್ನದ ತರಹ ಮಿನುಗುವ ನಾಡು
  ಚಿನ್ನದ ನಾಡಿದು ಸಿಹಿ ಕೊಡುವಂಥ ಈ ಕರುನಾಡು
ಜನ್ನ ಪಂಪರ ನೆಚ್ಚಿನ ನಾಡು
   ಕನ್ನಡಿಗರ ಕಲೆಯ ನೆಲೆ ಬೀಡು
   ಚೆನ್ನಕೇಶವನು ನೆಲೆಸಿದ ಕನ್ನಡಮ್ಮನ ನಾಡು


Monday, October 28, 2013

ನಾನೂ ನಿರೂಪಕನಾದಾಗ.. ನಾನೂ ನಿರೂಪಕನಾದಾಗ...

Monday, October 15, 2012

ಶಾಲೆಯ ಪ್ರವಾಸ

ಕಳೆದ ಸಲ ನಮ್ಮ ಶಾಲೆಯಿಂದ ೨೦೧೨ರ ಜನವರಿ ೧೧ನೇ ತಾರೀಕು ಪ್ರವಾಸಕ್ಕೆ ಕರ್ಕೊಂಡು ಹೋಗಿದ್ರು. ಎಲ್ಲಿಗೆ? ಎಲ್ಲೆಲ್ಲಿಗೆ? ಅಂತ ಮುಂದೆ ನೀವೆ ನೋಡಿ...

(ಕೆಂಗಲ್ ಹನುಮಂತರಾಯರ ಗುಡಿ: ಫೋಟೋ - ಅಂತರ್ಜಾಲ)
ಕೆಂಗಲ್ ಹನುಮಂತರಾಯನ ಗುಡಿ : ಇದು ಮೈಸೂರಿಗೆ ಹೋಗುವ ದಾರಿಯಲ್ಲಿ ಸಿಗೋ ಹನುಮಂತನ ಗುಡಿ. ಕೆಂಗಲ್ಲು ಅಂತಾ ಈ ಊರಿನ ಹೆಸರು. ರಾಮನಗರ ಆದಮೇಲೆ ಸೇತುವೆ ಹತ್ತಿರ ಇದೆ. ಇದು ತುಂಬಾ ಚೆನ್ನಾಗಿದೆ. ಇಲ್ಲಿ ನಮ್ಮ ತಿಂಡಿಯನ್ನು ಮುಗಿಸಿ ಅಲ್ಲಿಂದ ಹೊರಟೆವು.(ತೊಂಡನೂರು ಕೆರೆ: ಫೋಟೋ - ಅಂತರ್ಜಾಲ)
ತೊಂಡನೂರು ಕೆರೆ :

ಕೆಂಗಲ್ ಹನುಮಂತನ ಗುಡಿ ಮುಗಿಸಿಕೊಂಡು ತೊಂಡನೂರು ಕೆರೆಗೆ ಬಂದೆವು. ಇದು ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನಲ್ಲಿದೆ.  ಈ ಜಾಗದಲ್ಲಿ ತೊಂಡನೂರ ಎಂಬ ರಾಜ ರಾಜ್ಯಭಾರ ಮಾಡಿದ್ದ. ತೋಂಡನೆಂಬ ರಾಕ್ಷಸ ಇದ್ದ ಎಂಬ ಇತಿಹಾಸವೂ ಇದೆ. ಕಾಲ ಕ್ರಮೇಣ ಇದು ತೊಂಡನೂರು ಎಂದಾಯಿತು. ಹೀಗಾಗಿ ಈ ಕೆರೆಗೆ ತೊಂಡನೂರು ಕೆರೆ ಎನ್ನಲಾಗಿದೆ. ಎಂದು ನಮ್ಮ ಶಿಕ್ಷಕರು ತಿಳಿಸಿದರು. ನಾವು ಇದನ್ನು ಸಂತೋಷದಿಂದ ನೋಡಿದೆವು. ಇದು ತುಂಬ ಆಳವಿರುವ ಕಾರಣ ನಮಗೆ ಈಜಲು ಬಿಡಲಿಲ್ಲ. ಅದೇ ಕೆರೆಯ ನಾಲುವೆಯಲ್ಲಿ ನೀರಿಗೆ ಬಿಟ್ಟರು. ನಾವು ಸಂತೋಷದಿಂದ ಆಟವಾಡಿ ಬಂದೆವು. ಹೀಗೆ ಪ್ರವಾಸ ಮುಂದುವರಿಸಿದೆವು.


ಮೇಲುಕೋಟೆ :
ನಾವು ತೊಂಡನೂರು ಕೆರೆ ನೋಡಿಕೊಂಡು ಮುಂದೆ ನಮ್ಮ ಪ್ರವಾಸದ ಮುಖ್ಯ ತಾಣವಾದ ಮೇಲುಕೋಟೆಗೆ ಬಂದೆವು. ಮೇಲುಕೋಟೆ ಒಂದು ಸುಂದರ ತಾಣ. ಇದೂಕೂಡಾ  ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಒಂದು ಬೆಟ್ಟದ ಮೇಲೆ ಇದೆ. ಇಲ್ಲಿ ಹೊಯ್ಸಳರು ಕಟ್ಟಿಸಿರುವ ಎರೆಡು ಪ್ರಸಿದ್ಧವಾದ ದೇವಾಲಯಗಳಿವೆ. ಅವು ಬೆಟ್ಟದ ಮೇಲಿರುವ ಯೋಗನರಸಿಂಹ ಸ್ವಾಮಿಯ ಸುಂದರ ದೇವಾಲಯವಿದ್ದರೆ, ಬೆಟ್ಟದ ಕೆಳಗೆ ಚೆಲುವನಾರಾಯಣ ಸ್ವಾಮಿಯ ಆಕರ‍್ಷಣೀಯ ದೇವಾಲಯವಿದೆ. ಈ ಎರೆಡೂ ದೇವಾಲಯಗಳು ವಿಭಿನ್ನ ಶೈಲಿಯಲ್ಲಿದ್ದು ವಿಶಿಷ್ಟವಾಗಿದೆ. ಈ ಬೆಟ್ಟವನ್ನು ನಡೆದುಕೊಂಡೇ ಹತ್ತಬೇಕಾಗಿದ್ದು. ಅದಕ್ಕಾಗಿ ಅಲ್ಲಲ್ಲಿ ಗಾಳಿಗೋಪುರಗಳನ್ನು ನಿರ್ಮಿಸಲಾಗಿದೆ. ಮೇಲುಕೋಟೆಯ ದೇವಾಲಯಗಳೇ ನಮ್ಮ ಪ್ರವಾಸದ ಪ್ರಮುಖ ತಾಣವಾಗಿತ್ತು. ನಾವು ಗಾಡಿಯಲ್ಲಿ ಆಪ್ತರಕ್ಷಕ ಚಿತ್ರವನ್ನು ನೋಡಿದ್ದರಿಂದ ಆ ಚಿತ್ರವು ಚಿತ್ರೀಕರಣವಾದ ಸ್ಥಳಗಳಿಗೆ ಹೋಗಿ ಆ ಚಿತ್ರವನ್ನು ನೆನಪಿಸಿಕೊಳ್ಳುತ್ತಿದ್ದೆವು. ಈ ಸುಂದರವಾದ ದೇವಾಲಯಗಳನ್ನು ನೋಡಿ ಪ್ರವಾಸವನ್ನು ಮುಂದುವರೆಸಿದೆವು.

(ಹೊಸಹೊಳಲಿನ ಲಕ್ಷ್ಮೀನಾರಾಯಣ  ಗುಡಿ: ಫೋಟೋ - ಅಂತರ್ಜಾಲ)
ಹೊಸಹೊಳಲು: ಇದೂಕೂಡಾ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನಲ್ಲಿದೆ. ಇದು ಇಲ್ಲಿರುವ ಲಕ್ಷ್ಮೀನಾರಾಯಣ ದೇವಸ್ಥಾನಕ್ಕೆ ಪ್ರಖ್ಯಾತವಾಗಿದೆ. ಹೊಯ್ಸಳರ ರಾಜನಾದ ವೀರಸೋಮೇಶ್ವರನು ೧೩ನೇ ಶತಮಾನದಲ್ಲಿ ಕಟ್ಟಿಸಿರುವ ಸುಂದರವಾದ ಹಾಗೂ ಪ್ರಸಿದ್ಧವಾದ ದೇವಾಲಯವಿದು. ಈ ಚಿತ್ರದಲ್ಲೇ ಕಾಣಿಸುವಂತೆ ಹೊಯ್ಸಳರ ಎಲ್ಲಾ ದೇವಲಯಗಳಂತೆ ವಾಸ್ತುಶಿಲ್ಪಕ್ಕೆ ಹೆಚ್ಚು ಒತ್ತು ನೀಡಿದ್ದಾರೆ. ಅಪರೂಪವಾದ ಶಿಲ್ಪಕಲೆ ಹೊಂದಿರುವುದರಿಂದ ಈ ದೇವಸ್ಥಾನವು ರಮಣೀಯವಾಗಿ ಕಾಣಿಸುತ್ತದೆ. ಇಲ್ಲಿಂದ ಹಿಂತಿರುಗುವಷ್ಟರಲ್ಲಿ ರಾತ್ರಿಯಾಗಿತ್ತು. ಪ್ರವಾಸವು ಮುಗಿಯಿತೆಂದು ಬೇಜಾರಿದ್ದರೆ ಇನ್ನೊಂದೆಡೆ ಎಲ್ಲರೂ ಪ್ರವಾಸದಲ್ಲಿ ನಡೆದ ಹಾಸ್ಯ ಘಟನೆಗಳನ್ನು ನೆನೆದು ನಗುತ್ತಿದ್ದೆವು. ಮುಖ್ಯವಾಗಿ ಶಿಕ್ಷಕರು ನಮ್ಮನ್ನು ಸುರಕ್ಷಿತವಾಗಿ ಹಾಗೂ ಪ್ರವಾಸದಲ್ಲಿ ಎಲ್ಲೂ ಬೇಜಾರಾಗದಂತೆ ಬಸ್ಸಿನಲ್ಲಿ ಸಿನಿಮಾಗಳನ್ನು ಹಾಕಿಸಿದ್ದಕ್ಕಾಗಿ ಧನ್ಯವಾದವನ್ನು ತಿಳಿಸುವೆನು. 
    ನೀವು ಎಂದಾದರೂ ಮಂಡ್ಯ ಜಿಲ್ಲೆಗೆ ಹೋದರೆ ಈ ಪ್ರಸಿದ್ಧವಾದ ತಾಣಗಳನ್ನು ನೋಡಿಬರಲು ಮರೆಯದಿರಿ!!!!Tuesday, October 9, 2012

ಲಂಕಾ ಪ್ರಯಾಣ


ನಾನು ರಜಾ ಮುಗಿಸಿಕೊಂಡು ಶಾಲೆಗೆ ತುಂಬಾ ಖುಷಿಯಿಂದ ಹೋದೆ. ಏಕೆಂದರೆ ಈ ಬಾರಿ ನಾನು ರಜಾದಲ್ಲಿ ಶ್ರೀಲಂಕಾಗೆ ಹೋಗಿದ್ದೆ. ಅದು ನನ್ನ ಅಪ್ಪ, ಅಮ್ಮನ ಜೊತೆಗಲ್ಲ, ನನ್ನ ಗೆಳೆಯರ ಜೊತೆಯಲ್ಲಿ. ಗೆಳೆಯರ ಜೊತೇನಾ ಅಂತ ಯೋಚಿಸುತ್ತಿದೀರ? ನಮ್ಮ ಬಸವನಗುಡಿ ಕ್ರಿಕೆಟ್ ಅಕಾಡಮಿಯವರು ಒಂದಷ್ಟು ಮಕ್ಕಳನ್ನ ಆರಿಸಿಕೊಂಡು ಶ್ರಿಲಂಕಾಗೆ ಕರೆದುಕೊಂಡು ಹೋಗಿದ್ದರು. ಅವರಲ್ಲಿ ನಾನೂ ಒಬ್ಬ.

ಮೊದಲ ವಿಮಾನ ಯಾನ....


ಅದು ನಾನು ಮೊದಲನೇ ಬಾರಿ ವಿದೇಶಕ್ಕೆ, ಅದರಲ್ಲೂ ವಿಮಾನದಲ್ಲಿ ಹೋಗುತ್ತಾ ಇದ್ದದ್ದು. ಆಗ ನನಗೆ ತುಂಬ ಭಯ ಆಗುತ್ತಿತ್ತು. ನಾನು ಅಂದರೂ ಹೇಗೋ ಭಯದಿಂದ ವಿಮಾನವನ್ನು ಹತ್ತಿದೆ. ನಾವು ರಾತ್ರಿ ಹೊರಟಿದ್ದರಿಂದ ಬರಿ ದೀಪಗಳೇ ಕಾಣುತಿತ್ತು. ಅದರ ಜೊತೆ ಸಮುದ್ರ, ಮೋಡಗಳೆಲ್ಲಾ ಕಾಣುತಿದ್ದವು. ಕೊನೆಗೂ ಶ್ರಿಲಂಕಾ ಸೇರಿದೆವು.


ಶ್ರೀಲಂಕಾದಲ್ಲಿ...


ಹೋದ ನಂತರ ಕೊಲಂಬೊದಲ್ಲಿನ ಹೋಟೆಲ್ಲಿನ ರೂಮಿನಲ್ಲಿ ಮಲಗಿಕೊಂಡೆವು. ಅಲ್ಲಿ ಮೊದಲನೇ ದಿನ ಖುಶಿ ಖುಶಿಯಾಗೇ ಎದ್ದೆ. ಸ್ನಾನ ಮುಗಿಸಿಕೊಂಡು ತಿಂಡಿ ತಿಂದೆವು. ತಕ್ಷಣ ಎಲ್ಲರೂ ಗಾಡಿ ಹತ್ತಿದೆವು. ಆಗ ನಾವು R.ಪ್ರೇಮದಾಸ  ಆಟದ ಮೈದಾನಕ್ಕೆ ಹೊರಟಿದ್ದೆವು. ಮೈದಾನವು ತುಂಬಾ ಚೆನ್ನಾಗಿತ್ತು. ಅದು ನಾನು ವಿದೇಶದಲ್ಲಿ ಮೊದಲನೇ ಬಾರಿ ಅಂತರಾಷ್ಟ್ರೀಯ ಕ್ರೀಡಾ ಮೈದಾನವನ್ನ ನೊಡುತ್ತಿದ್ದುದರಿಂದ ಅಲ್ಲಿ ಬಿದ್ದೆವು, ಎದ್ದೆವು, ಕುಣಿದೆವು, ತರ್ಲೆ ಮಾಡಿದೆವು. ಆಮೇಲೆ ಒಂದು ಫೋಟೋವನ್ನು ತೆಗೆಸಿಕೊಂಡೆವು. ಅದನ್ನು ನೋಡಿ ಬರುವಷ್ಟರಲ್ಲಿ ರಾತ್ರಿಯಾಗಿತ್ತು. ಬಂದು ಮಲಗಿದ್ವಿ.
    ೨ನೇ ದಿನ ನಮ್ಮನ್ನು ಅಂಗಡಿಯಲ್ಲಿ ವಸ್ತುಗಳನ್ನು ಕೊಳ್ಳಲುಬಿಟ್ಟರು. ನಾನು ನನಗಾಗಿ ಒಂದು ಕೈ ಗಡಿಯಾರ, ಅಪ್ಪನಿಗಾಗಿ ಒಂದು ಪರ್ಸು, ಅಣ್ಣನಿಗಾಗಿ ಈಜಲು ಬೇಕಾದ ಸಾಮಗ್ರಿಗಳು, ಅಮ್ಮನಿಗಾಗಿ ಒಂದು ಸೀರೆಯನ್ನು ಖರೀದಿಸಿದೆನು.ನಂತರ ಎಲ್ಲರೂ ಮಧ್ಯಾನದ ಊಟಕ್ಕಾಗಿ ಪಿಜ್ಜಾ ಹಟ್‍ಗೆ ಹೋದೆವು. ಅಲ್ಲಿ ಪಿಜ್ಜಾ ತಿಂದು ಆಟವಾಡಲೆಂದು ವೀಡಿಯೊ ಗೇಮ್ಸ್ ಅಂಗಡಿಗೆ ಹೋದೆವು. ಅಲ್ಲಿ ಆಟ ಮುಗಿಸಿಕೊಂಡು ಹೋಟೆಲ್ಲಿಗೆ ಹೋಗುವಷ್ಟರಲ್ಲಿ ರಾತ್ರಿಯಾಗಿತ್ತು. ಹೋಗಿ ಮಲಗಿದ್ದೆವು.

ಪಂದ್ಯದ ವರದಿ


ಶ್ರೀಲಂಕಾದಲ್ಲಿ ನಾವು ೬ ಪಂದ್ಯಗಳನ್ನು ಆಡಬೇಕೆಂದುಕೊಂಡಿದ್ದೆವು. ಆದರೆ ಮಳೆ ಬಂದಿದ್ದ ಕಾರಣ, ಕೇವಲ ೫ ಪಂದ್ಯಗಳನ್ನು ಆಡಲು ಮಾತ್ರ ಸಾಧ್ಯವಾಯಿತು. ಮೊದಲನೆಯ ಪಂದ್ಯದಲ್ಲಿ ನಾವು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡು ೨೦ ಓವರ್‌ಗಳಲ್ಲಿ ೧೦೪ ರನ್‌ಗಳನ್ನು ಕಲೆಹಾಕಿದೆವು. ಬೌಲಿಂಗ್‌ನಲ್ಲಿ ನಾವು ಅವರನ್ನು ತಡೆಯಲು ಸಾಧ್ಯವಾಗಲಿಲ್ಲ. ಆದರೂ ೧೮ ಓವರ್ ಬೌಲ್ ಮಾಡಿದೆವು. ಅವರು ೧೮ ಓವರ್‌ಗಳಲ್ಲಿ ೧೦೫ ರನ್ ದಾಖಲಿಸಿ ಜಯ ಸಾಧಿಸಿದರು. ಅದೇ ದಿನ ತಿಂಡಿ ತಿಂದು ಬೇರೆ ತಂಡದ ಮೇಲೆ ಇನ್ನೊಂದು ಪಂದ್ಯವನ್ನು ಆಡಿದೆವು. ಆದರೆ ಅದರಲ್ಲೂ ಸೋತೆವು. ಅಂದೇ ನಾವು ಇಂಡೋರ್ ನೆಟ್ಸ್‌ಗೆ ಹೋಗಿ ಅಭ್ಯಾಸ ನಡೆಸಿದೆವು. ಮಾರನೆಯ ನಾವು ಮೂರು ಪಂದ್ಯಗಳನ್ನಾಡಲು ತಯಾರಾಗಿದ್ದೆವು. ಆ ದಿನ ಎಲ್ಲರೂ ೪:೪೫ಕ್ಕೆ ಎದ್ದು ತಿಂಡಿಯನ್ನು ಬೇಗ ಮುಗಿಸಿ ತಕ್ಷಣ ಹೊರಟೆವು. ಅಂದು ನಾವು ಮೂರು ಪಂದ್ಯಗಳನ್ನಾಡಿದೆವು (೨೦ ಓವರ್, ೧೫ ಓವರ್, ೧೦ ಓವರ್). ಆದರೆ ದುರದೃಷ್ಟವಶಾತ್ ನಾವು ಮೂರೂ ಪಂದ್ಯಗಳನ್ನೂ ಸೋತೆವು. ಇದರಿಂದ ನಾವು ಅಪಾರವಾದ ಕಲಿಕೆ ಕಲಿತೆವು ಹಾಗೂ ಅಂತರಾಷ್ಟ್ರೀಯ ಕ್ರಿಕಟ್‌ನಲ್ಲಿ ಎದುರಾಳಿಗಳನ್ನು ಹೇಗೆ ಎದುರಿಸಬೇಕೆಂದು ಕಲಿತೆವು. ಒತ್ತಡದ ಪರಿಸ್ಥಿತಿಯಲ್ಲಿ ಹೇಗೆ ಆಟವಾಡಬೇಕೆಂದು ತಿಳಿದೆವು. ಅಂದು ರಾತ್ರಿ ೯:೩೦ಕ್ಕೆ ಎಲ್ಲರೂ ಹೋಟೆಲ್ಲಿಗೆ ಬಂದೆವು. 


ಹೋಟೆಲ್‌ನಲ್ಲಿ ಅಂದು ರಾತ್ರಿ ೧೦:೦೦ ಗಂಟೆಗೆ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು. ಅದರಲ್ಲಿ ಪ್ರತೀಕ್ ಎಂಬುವವನನ್ನು ಬೆಸ್ಟ್ ಬ್ಯಾಟ್ಸ್‌ಮನ್, ನನ್ನನ್ನು ಬೆಸ್ಟ್ ಬೌಲರ್, ಕನಿಷ್ಕಎಂಬುವವನನ್ನು ಅಪ್ ಕಮಿಂಗ್ ಕ್ರಿಕೆಟರ್ ಎಂದು ಆರಿಸಲಾಯಿತು. ಮರುದಿನ ನಾವು ಬೆಂಗಳೂರಿಗೆ ವಾಪಸ್ಸು ಬಂದೆವು. ಆರುದಿನಗಳ ಶ್ರೀಲಂಕಾ ಪ್ರವಾಸವು ನನ್ನ ಬದುಕಿನ ಒಂದು ಒಳ್ಳೆಯ ಅನುಭವವೆಂದು ಹೇಳಲು ಖುಶಿಯಾಗುತ್ತದೆ.

Thursday, May 19, 2011

ಅಂತೂ ಇಂತೂ ರಜ ಬಂತು !!


ಒಂದನೇ ದೊಡ್ಡ ಪರೀಕ್ಷೆ ಮುಗೀತು ಅಂತ ಇದ್ರೆ, ಎರಡನೆಯ ದೊಡ್ಡ ಪರೀಕ್ಷೆ ಶುರುವಾಯ್ತು. ಆ ತಿಂಗಳು ಪರೀಕ್ಷೆ ಬರತ್ತೆ ಅನ್ನೋ ಭಯ ಆದ್ರೆ, ಪರೀಕ್ಷೆ ಮುಗಿದಾದ್ಮೇಲೆ ರಜಾ ಬರತ್ತೆ ಅನ್ನೋ ಖುಷಿ. ಆದರೂ ಪರೀಕ್ಷೇನಾ ಹೇಗೋ ಮುಗಿಸಿದೆ. ರಜಾ ಶುರುವಾಯ್ತು, ಖುಷಿನೂ ಆಯಿತು. ಆದ್ರೆ ಫಲಿತಾಂಶ ಏನು ಬರತ್ತೆ ಅನ್ನೋ ಭಯ ಶುರುವಾಯ್ತು.ಅಂತೂ ಭಯದಿಂದಲೇ ಫಲಿತಾಂಶ ನೋಡಕ್ಕೆ ಹೋದೆ. ಫಲಿತಾಂಶನ ನೋಡಿ ತುಂಬ ಖುಷಿಯಾಯ್ತು. ಯಾಕಂದ್ರೆ ನಾನು ಕ್ಲಾಸಿಗೆ ಮೊದಲನೆಯವನಾಗಿ ಬಂದಿದ್ದೆ. ನಾನು ಕ್ಲಾಸಿಗೆ ಮೊದಲಿಗನಾಗಿ ಬಂದಿದ್ದು ಇದು ೫ನೇ ಬಾರಿ.ಅಂದ್ರು ನಂಗೆ ಭಯ ಆಗ್ತಿದ್ದದ್ದು, ಈ ಬಾರಿ ನಾನು ಕ್ಲಾಸಿಗೆ ಮೊದಲನೆಯವನಾಗಿ ಬರ್ತಿನೋ ಇಲ್ವೋ ಅಂತ. ರಜಾ ಹತ್ತೇದಿನಕ್ಕೆ ಬೇಜಾರಾಗಕ್ಕೆ ಶುರುವಾಯ್ತು. ಹೆಂಗೆ ಕಾಲ ಕಳಿಯೋದು ಅಂತ ಅಂದ್ಕೊತಿದ್ದಾಗ 2ವರ್ಷದಿಂದ ಹೋಗ್ತಿದ್ದ ಕ್ರಿಕೆಟ್ ಕ್ಯಾಂಪ್ ನೆನಪಾಯ್ತು. ಕೊನೆಗೆ ಸೇರ್ಕೊಂಡೆ. ಈಗ್ಲೂ ಹಾಗೆ ಕಾಲ ಕಳಿತಿದ್ದೀನಿ.ಇನ್ನು ಹದಿನೈದು ದಿನಕ್ಕೆ ಸ್ಕೂಲ್ ಶುರುವಾಗುತ್ತೆ ಅಂತ ತುಂಬ ಖುಷಿಯಾಗ್ತಿದೆ.

Wednesday, October 27, 2010

ಮಜವಾಗಿತ್ತು ದಸರಾ ರಜ!!!

ಈಗ ಯಾಣ ಪ್ರಯಾಣ ಮುಗೀತು. ನಾನು ಮತ್ತೆ ನನ್ನ ಅಪ್ಪ ಅಮ್ಮ ಸೆಪ್ಟೆಂಬರ್ ರಜ ಕಳಿಯಕ್ಕೆ ಅಂತ ಶ್ರೀ ರಂಗ ಪಟ್ಟಣಕ್ಕೆ ಹೋಗಿದ್ವಿ. ಬೆಂಗಳೂರು ಬೆಳಗ್ಗೆ ಬಿಟ್ಟು ಸಾಯಂಕಾಲ ಶ್ರೀ ರಂಗ ಪಟ್ಟಣ ತಲುಪುದ್ವಿ. ಅಲ್ಲಿ ಉಳಿಯಕ್ಕೆ ಬಾಲಾಜಿ ರೆಸಿಡೆನ್ಸಿ ಲಾಡ್ಜಲ್ಲಿದ್ವಿ.ಒಂದು ದಿವ್ಸ ಲಾಡ್ಜಲ್ಲಿದ್ದ ನಾವು ಮಾರನೆ ದಿನ ಬೆಳಿಗ್ಗೆ ಅದೆ ಹೋಟೆಲ್ ನಲ್ಲಿ ತಿಂಡಿ ತಿಂದು ರಂಗನತಿಟ್ಟು ಪಕ್ಷಿ ಧಾಮಕ್ಕೆ ಹೋಗಿದ್ವಿ

ಅದ್ಭುತ ಪಕ್ಷಿಧಾಮ !

ರಂಗನ ತಿಟ್ಟಂತು ತುಂಬ ಚನ್ನಾಗಿತ್ತು.ಅಲ್ಲಿ ನಾವು ದೋಣಿನಲ್ಲಿ ಹೋಗಿದ್ವಿ.
ಅಲ್ಲಿ ಎಷ್ಟು ಥರ ಹಕ್ಕಿ ಇತ್ತು ಅಂದ್ರೆ ಸ್ಪೂನ್ ಬಿಲ್ಲಂತೆ,ಹಾವಕ್ಕಿಯಂತೆ ಎನ್ನು ಎಷ್ಟೊಂದು ಥರ ಹಕ್ಕಿ ಇತ್ತು ಗೊತ್ತ! ಅವೆಲ್ಲ ತುಂಬ ಚನ್ನಾಗಿತ್ತು.ಹಾವಕ್ಕಿಯ ಕತ್ತನ್ನು ನೋಡ್ತಿದ್ರೆ ಹಾವೇ ರೆಕ್ಕೆ ಪುಕ್ಕ ಇಟ್ಕೊಂಡು ಬಂದಿದ್ಯೇನೋ ಅನ್ನುಸ್ತಿತ್ತು.ಇನ್ನು ಸ್ಪೂನ್ ಬಿಲ್ ಮೂತಿಯಂತೂ ಸ್ಪೂನ್ ಥರಾನೆ ಇತ್ತು!!
ರಂಗನಾಥನ ದೇವಸ್ಥಾನ....
ರಂಗನಾಥನ ದೇವಸ್ಥಾನ ತುಂಬಾ ಚೆನ್ನಾಗಿತ್ತು. ಅಲ್ಲಿನ ರಂಗನಾಥನ ವಿಗ್ರಹಾನ ಕಪ್ಪು ಕಲ್ಲಿನಿಂದ ಕೆತ್ತಿದ್ರು. ನಾನು ಮತ್ತೆ ನನ್ನ ಅಣ್ಣ ದೇವಸ್ಥಾನದ ತನಕ ಕುದರೆ ಮೇಲೆ ಕೂತ್ಕೊಂಡು ಹೋಗಿದ್ದು ತುಂಬ ಚೆನ್ನಾಗಿತ್ತು. ದೇವಸ್ಥಾನ ಅಂತೂ ತುಂಬಾ ದೊಡ್ಡದಾಗಿತ್ತು. ಒಟ್ಟಿನಲ್ಲಿ ದೇವಸ್ಥಾನ ಯಾರು ಏನೇ ಹೇಳಿದ್ರು ತುಂಬಾ ಚೆನ್ನಾಗಿತ್ತು!!
ನೀವೂ ನೋಡಿ!!
ಇಷ್ಟೆಲ್ಲಾ ಓದಿದ್ಮೇಲೆ ನಿಮಗೂ ನೋಡ್ಬೇಕು ಅನ್ಸಿದೆ ಅಲ್ವಾ? ಹಾಗಿದ್ರೆ ಮುಂದಿನ ಸತಿ ದಸರ ಹಬ್ಬಕ್ಕೆ ಮೈಸೂರಿಗೆ ಹೋದಾಗ ಇವುಗಳನ್ನು ನೀವೂ ನೋಡ್ಕೊಂಡು ಬನ್ನಿ!!!!