ಕಳೆದ ಸಲ ನಮ್ಮ ಶಾಲೆಯಿಂದ ೨೦೧೨ರ ಜನವರಿ ೧೧ನೇ ತಾರೀಕು ಪ್ರವಾಸಕ್ಕೆ ಕರ್ಕೊಂಡು ಹೋಗಿದ್ರು. ಎಲ್ಲಿಗೆ? ಎಲ್ಲೆಲ್ಲಿಗೆ? ಅಂತ ಮುಂದೆ ನೀವೆ ನೋಡಿ...
![]() |
| (ಕೆಂಗಲ್ ಹನುಮಂತರಾಯರ ಗುಡಿ: ಫೋಟೋ - ಅಂತರ್ಜಾಲ) |
ಕೆಂಗಲ್ ಹನುಮಂತರಾಯನ ಗುಡಿ : ಇದು ಮೈಸೂರಿಗೆ ಹೋಗುವ ದಾರಿಯಲ್ಲಿ ಸಿಗೋ ಹನುಮಂತನ ಗುಡಿ. ಕೆಂಗಲ್ಲು ಅಂತಾ ಈ ಊರಿನ ಹೆಸರು. ರಾಮನಗರ ಆದಮೇಲೆ ಸೇತುವೆ ಹತ್ತಿರ ಇದೆ. ಇದು ತುಂಬಾ ಚೆನ್ನಾಗಿದೆ. ಇಲ್ಲಿ ನಮ್ಮ ತಿಂಡಿಯನ್ನು ಮುಗಿಸಿ ಅಲ್ಲಿಂದ ಹೊರಟೆವು.
![]() |
| (ತೊಂಡನೂರು ಕೆರೆ: ಫೋಟೋ - ಅಂತರ್ಜಾಲ) |
ಕೆಂಗಲ್ ಹನುಮಂತನ ಗುಡಿ ಮುಗಿಸಿಕೊಂಡು ತೊಂಡನೂರು ಕೆರೆಗೆ ಬಂದೆವು. ಇದು ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನಲ್ಲಿದೆ. ಈ ಜಾಗದಲ್ಲಿ ತೊಂಡನೂರ ಎಂಬ ರಾಜ ರಾಜ್ಯಭಾರ ಮಾಡಿದ್ದ. ತೋಂಡನೆಂಬ ರಾಕ್ಷಸ ಇದ್ದ ಎಂಬ ಇತಿಹಾಸವೂ ಇದೆ. ಕಾಲ ಕ್ರಮೇಣ ಇದು ತೊಂಡನೂರು ಎಂದಾಯಿತು. ಹೀಗಾಗಿ ಈ ಕೆರೆಗೆ ತೊಂಡನೂರು ಕೆರೆ ಎನ್ನಲಾಗಿದೆ. ಎಂದು ನಮ್ಮ ಶಿಕ್ಷಕರು ತಿಳಿಸಿದರು. ನಾವು ಇದನ್ನು ಸಂತೋಷದಿಂದ ನೋಡಿದೆವು. ಇದು ತುಂಬ ಆಳವಿರುವ ಕಾರಣ ನಮಗೆ ಈಜಲು ಬಿಡಲಿಲ್ಲ. ಅದೇ ಕೆರೆಯ ನಾಲುವೆಯಲ್ಲಿ ನೀರಿಗೆ ಬಿಟ್ಟರು. ನಾವು ಸಂತೋಷದಿಂದ ಆಟವಾಡಿ ಬಂದೆವು. ಹೀಗೆ ಪ್ರವಾಸ ಮುಂದುವರಿಸಿದೆವು.

ಮೇಲುಕೋಟೆ :
ನಾವು ತೊಂಡನೂರು ಕೆರೆ ನೋಡಿಕೊಂಡು ಮುಂದೆ ನಮ್ಮ ಪ್ರವಾಸದ ಮುಖ್ಯ ತಾಣವಾದ ಮೇಲುಕೋಟೆಗೆ ಬಂದೆವು. ಮೇಲುಕೋಟೆ ಒಂದು ಸುಂದರ ತಾಣ. ಇದೂಕೂಡಾ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಒಂದು ಬೆಟ್ಟದ ಮೇಲೆ ಇದೆ. ಇಲ್ಲಿ ಹೊಯ್ಸಳರು ಕಟ್ಟಿಸಿರುವ ಎರೆಡು ಪ್ರಸಿದ್ಧವಾದ ದೇವಾಲಯಗಳಿವೆ. ಅವು ಬೆಟ್ಟದ ಮೇಲಿರುವ ಯೋಗನರಸಿಂಹ ಸ್ವಾಮಿಯ ಸುಂದರ ದೇವಾಲಯವಿದ್ದರೆ, ಬೆಟ್ಟದ ಕೆಳಗೆ ಚೆಲುವನಾರಾಯಣ ಸ್ವಾಮಿಯ ಆಕರ್ಷಣೀಯ ದೇವಾಲಯವಿದೆ. ಈ ಎರೆಡೂ ದೇವಾಲಯಗಳು ವಿಭಿನ್ನ ಶೈಲಿಯಲ್ಲಿದ್ದು ವಿಶಿಷ್ಟವಾಗಿದೆ. ಈ ಬೆಟ್ಟವನ್ನು ನಡೆದುಕೊಂಡೇ ಹತ್ತಬೇಕಾಗಿದ್ದು. ಅದಕ್ಕಾಗಿ ಅಲ್ಲಲ್ಲಿ ಗಾಳಿಗೋಪುರಗಳನ್ನು ನಿರ್ಮಿಸಲಾಗಿದೆ. ಮೇಲುಕೋಟೆಯ ದೇವಾಲಯಗಳೇ ನಮ್ಮ ಪ್ರವಾಸದ ಪ್ರಮುಖ ತಾಣವಾಗಿತ್ತು. ನಾವು ಗಾಡಿಯಲ್ಲಿ ಆಪ್ತರಕ್ಷಕ ಚಿತ್ರವನ್ನು ನೋಡಿದ್ದರಿಂದ ಆ ಚಿತ್ರವು ಚಿತ್ರೀಕರಣವಾದ ಸ್ಥಳಗಳಿಗೆ ಹೋಗಿ ಆ ಚಿತ್ರವನ್ನು ನೆನಪಿಸಿಕೊಳ್ಳುತ್ತಿದ್ದೆವು. ಈ ಸುಂದರವಾದ ದೇವಾಲಯಗಳನ್ನು ನೋಡಿ ಪ್ರವಾಸವನ್ನು ಮುಂದುವರೆಸಿದೆವು.
![]() |
| (ಹೊಸಹೊಳಲಿನ ಲಕ್ಷ್ಮೀನಾರಾಯಣ ಗುಡಿ: ಫೋಟೋ - ಅಂತರ್ಜಾಲ) |
ಹೊಸಹೊಳಲು: ಇದೂಕೂಡಾ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನಲ್ಲಿದೆ. ಇದು ಇಲ್ಲಿರುವ ಲಕ್ಷ್ಮೀನಾರಾಯಣ ದೇವಸ್ಥಾನಕ್ಕೆ ಪ್ರಖ್ಯಾತವಾಗಿದೆ. ಹೊಯ್ಸಳರ ರಾಜನಾದ ವೀರಸೋಮೇಶ್ವರನು ೧೩ನೇ ಶತಮಾನದಲ್ಲಿ ಕಟ್ಟಿಸಿರುವ ಸುಂದರವಾದ ಹಾಗೂ ಪ್ರಸಿದ್ಧವಾದ ದೇವಾಲಯವಿದು. ಈ ಚಿತ್ರದಲ್ಲೇ ಕಾಣಿಸುವಂತೆ ಹೊಯ್ಸಳರ ಎಲ್ಲಾ ದೇವಲಯಗಳಂತೆ ವಾಸ್ತುಶಿಲ್ಪಕ್ಕೆ ಹೆಚ್ಚು ಒತ್ತು ನೀಡಿದ್ದಾರೆ. ಅಪರೂಪವಾದ ಶಿಲ್ಪಕಲೆ ಹೊಂದಿರುವುದರಿಂದ ಈ ದೇವಸ್ಥಾನವು ರಮಣೀಯವಾಗಿ ಕಾಣಿಸುತ್ತದೆ. ಇಲ್ಲಿಂದ ಹಿಂತಿರುಗುವಷ್ಟರಲ್ಲಿ ರಾತ್ರಿಯಾಗಿತ್ತು. ಪ್ರವಾಸವು ಮುಗಿಯಿತೆಂದು ಬೇಜಾರಿದ್ದರೆ ಇನ್ನೊಂದೆಡೆ ಎಲ್ಲರೂ ಪ್ರವಾಸದಲ್ಲಿ ನಡೆದ ಹಾಸ್ಯ ಘಟನೆಗಳನ್ನು ನೆನೆದು ನಗುತ್ತಿದ್ದೆವು. ಮುಖ್ಯವಾಗಿ ಶಿಕ್ಷಕರು ನಮ್ಮನ್ನು ಸುರಕ್ಷಿತವಾಗಿ ಹಾಗೂ ಪ್ರವಾಸದಲ್ಲಿ ಎಲ್ಲೂ ಬೇಜಾರಾಗದಂತೆ ಬಸ್ಸಿನಲ್ಲಿ ಸಿನಿಮಾಗಳನ್ನು ಹಾಕಿಸಿದ್ದಕ್ಕಾಗಿ ಧನ್ಯವಾದವನ್ನು ತಿಳಿಸುವೆನು.
ನೀವು ಎಂದಾದರೂ ಮಂಡ್ಯ ಜಿಲ್ಲೆಗೆ ಹೋದರೆ ಈ ಪ್ರಸಿದ್ಧವಾದ ತಾಣಗಳನ್ನು ನೋಡಿಬರಲು ಮರೆಯದಿರಿ!!!!
ನೀವು ಎಂದಾದರೂ ಮಂಡ್ಯ ಜಿಲ್ಲೆಗೆ ಹೋದರೆ ಈ ಪ್ರಸಿದ್ಧವಾದ ತಾಣಗಳನ್ನು ನೋಡಿಬರಲು ಮರೆಯದಿರಿ!!!!



ಒಳ್ಳೊಳ್ಳೆಯ ತಾಣಗಳಿಗೆ ಹೋಗಿದ್ದೀರಿ. ಹೊಸಹೊಳಲು ಬಗ್ಗೆ ಗೊತ್ತಿರಲಿಲ್ಲ. ತಿಳಿಸಿದ್ದಕ್ಕೆ ಧನ್ಯವಾದಗಳು. ಚೆನ್ನಾಗಿ ಬರೆದಿದ್ದೀಯ.
ReplyDeleteನಾವು ಸ್ಕೂಲಿಂದ ಮೈಸೂರಿಗೆ ಹೋಗಿದ್ದಾಗ ಕೆಂಗಲ್ ಹನುಮಂತರಾಯನ ಗುಡಿಗೆ ಹೋಗಿದ್ದಿದ್ದು ನೆನಪಾಯ್ತು... ಹೀಗೆ ಪ್ರವಾಸಕ್ಕೆ ಹೋಗ್ತಾ ಇರಿ... ಬ್ಲಾಗ್ ಕೂಡ ಬರೀತಾ ಇರಿ :)
ReplyDelete