Showing posts with label ರಜೆ. Show all posts
Showing posts with label ರಜೆ. Show all posts

Tuesday, October 9, 2012

ಲಂಕಾ ಪ್ರಯಾಣ


ನಾನು ರಜಾ ಮುಗಿಸಿಕೊಂಡು ಶಾಲೆಗೆ ತುಂಬಾ ಖುಷಿಯಿಂದ ಹೋದೆ. ಏಕೆಂದರೆ ಈ ಬಾರಿ ನಾನು ರಜಾದಲ್ಲಿ ಶ್ರೀಲಂಕಾಗೆ ಹೋಗಿದ್ದೆ. ಅದು ನನ್ನ ಅಪ್ಪ, ಅಮ್ಮನ ಜೊತೆಗಲ್ಲ, ನನ್ನ ಗೆಳೆಯರ ಜೊತೆಯಲ್ಲಿ. ಗೆಳೆಯರ ಜೊತೇನಾ ಅಂತ ಯೋಚಿಸುತ್ತಿದೀರ? ನಮ್ಮ ಬಸವನಗುಡಿ ಕ್ರಿಕೆಟ್ ಅಕಾಡಮಿಯವರು ಒಂದಷ್ಟು ಮಕ್ಕಳನ್ನ ಆರಿಸಿಕೊಂಡು ಶ್ರಿಲಂಕಾಗೆ ಕರೆದುಕೊಂಡು ಹೋಗಿದ್ದರು. ಅವರಲ್ಲಿ ನಾನೂ ಒಬ್ಬ.

ಮೊದಲ ವಿಮಾನ ಯಾನ....


ಅದು ನಾನು ಮೊದಲನೇ ಬಾರಿ ವಿದೇಶಕ್ಕೆ, ಅದರಲ್ಲೂ ವಿಮಾನದಲ್ಲಿ ಹೋಗುತ್ತಾ ಇದ್ದದ್ದು. ಆಗ ನನಗೆ ತುಂಬ ಭಯ ಆಗುತ್ತಿತ್ತು. ನಾನು ಅಂದರೂ ಹೇಗೋ ಭಯದಿಂದ ವಿಮಾನವನ್ನು ಹತ್ತಿದೆ. ನಾವು ರಾತ್ರಿ ಹೊರಟಿದ್ದರಿಂದ ಬರಿ ದೀಪಗಳೇ ಕಾಣುತಿತ್ತು. ಅದರ ಜೊತೆ ಸಮುದ್ರ, ಮೋಡಗಳೆಲ್ಲಾ ಕಾಣುತಿದ್ದವು. ಕೊನೆಗೂ ಶ್ರಿಲಂಕಾ ಸೇರಿದೆವು.


ಶ್ರೀಲಂಕಾದಲ್ಲಿ...


ಹೋದ ನಂತರ ಕೊಲಂಬೊದಲ್ಲಿನ ಹೋಟೆಲ್ಲಿನ ರೂಮಿನಲ್ಲಿ ಮಲಗಿಕೊಂಡೆವು. ಅಲ್ಲಿ ಮೊದಲನೇ ದಿನ ಖುಶಿ ಖುಶಿಯಾಗೇ ಎದ್ದೆ. ಸ್ನಾನ ಮುಗಿಸಿಕೊಂಡು ತಿಂಡಿ ತಿಂದೆವು. ತಕ್ಷಣ ಎಲ್ಲರೂ ಗಾಡಿ ಹತ್ತಿದೆವು. ಆಗ ನಾವು R.ಪ್ರೇಮದಾಸ  ಆಟದ ಮೈದಾನಕ್ಕೆ ಹೊರಟಿದ್ದೆವು. ಮೈದಾನವು ತುಂಬಾ ಚೆನ್ನಾಗಿತ್ತು. ಅದು ನಾನು ವಿದೇಶದಲ್ಲಿ ಮೊದಲನೇ ಬಾರಿ ಅಂತರಾಷ್ಟ್ರೀಯ ಕ್ರೀಡಾ ಮೈದಾನವನ್ನ ನೊಡುತ್ತಿದ್ದುದರಿಂದ ಅಲ್ಲಿ ಬಿದ್ದೆವು, ಎದ್ದೆವು, ಕುಣಿದೆವು, ತರ್ಲೆ ಮಾಡಿದೆವು. ಆಮೇಲೆ ಒಂದು ಫೋಟೋವನ್ನು ತೆಗೆಸಿಕೊಂಡೆವು. ಅದನ್ನು ನೋಡಿ ಬರುವಷ್ಟರಲ್ಲಿ ರಾತ್ರಿಯಾಗಿತ್ತು. ಬಂದು ಮಲಗಿದ್ವಿ.
    ೨ನೇ ದಿನ ನಮ್ಮನ್ನು ಅಂಗಡಿಯಲ್ಲಿ ವಸ್ತುಗಳನ್ನು ಕೊಳ್ಳಲುಬಿಟ್ಟರು. ನಾನು ನನಗಾಗಿ ಒಂದು ಕೈ ಗಡಿಯಾರ, ಅಪ್ಪನಿಗಾಗಿ ಒಂದು ಪರ್ಸು, ಅಣ್ಣನಿಗಾಗಿ ಈಜಲು ಬೇಕಾದ ಸಾಮಗ್ರಿಗಳು, ಅಮ್ಮನಿಗಾಗಿ ಒಂದು ಸೀರೆಯನ್ನು ಖರೀದಿಸಿದೆನು.ನಂತರ ಎಲ್ಲರೂ ಮಧ್ಯಾನದ ಊಟಕ್ಕಾಗಿ ಪಿಜ್ಜಾ ಹಟ್‍ಗೆ ಹೋದೆವು. ಅಲ್ಲಿ ಪಿಜ್ಜಾ ತಿಂದು ಆಟವಾಡಲೆಂದು ವೀಡಿಯೊ ಗೇಮ್ಸ್ ಅಂಗಡಿಗೆ ಹೋದೆವು. ಅಲ್ಲಿ ಆಟ ಮುಗಿಸಿಕೊಂಡು ಹೋಟೆಲ್ಲಿಗೆ ಹೋಗುವಷ್ಟರಲ್ಲಿ ರಾತ್ರಿಯಾಗಿತ್ತು. ಹೋಗಿ ಮಲಗಿದ್ದೆವು.

ಪಂದ್ಯದ ವರದಿ


ಶ್ರೀಲಂಕಾದಲ್ಲಿ ನಾವು ೬ ಪಂದ್ಯಗಳನ್ನು ಆಡಬೇಕೆಂದುಕೊಂಡಿದ್ದೆವು. ಆದರೆ ಮಳೆ ಬಂದಿದ್ದ ಕಾರಣ, ಕೇವಲ ೫ ಪಂದ್ಯಗಳನ್ನು ಆಡಲು ಮಾತ್ರ ಸಾಧ್ಯವಾಯಿತು. ಮೊದಲನೆಯ ಪಂದ್ಯದಲ್ಲಿ ನಾವು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡು ೨೦ ಓವರ್‌ಗಳಲ್ಲಿ ೧೦೪ ರನ್‌ಗಳನ್ನು ಕಲೆಹಾಕಿದೆವು. ಬೌಲಿಂಗ್‌ನಲ್ಲಿ ನಾವು ಅವರನ್ನು ತಡೆಯಲು ಸಾಧ್ಯವಾಗಲಿಲ್ಲ. ಆದರೂ ೧೮ ಓವರ್ ಬೌಲ್ ಮಾಡಿದೆವು. ಅವರು ೧೮ ಓವರ್‌ಗಳಲ್ಲಿ ೧೦೫ ರನ್ ದಾಖಲಿಸಿ ಜಯ ಸಾಧಿಸಿದರು. ಅದೇ ದಿನ ತಿಂಡಿ ತಿಂದು ಬೇರೆ ತಂಡದ ಮೇಲೆ ಇನ್ನೊಂದು ಪಂದ್ಯವನ್ನು ಆಡಿದೆವು. ಆದರೆ ಅದರಲ್ಲೂ ಸೋತೆವು. ಅಂದೇ ನಾವು ಇಂಡೋರ್ ನೆಟ್ಸ್‌ಗೆ ಹೋಗಿ ಅಭ್ಯಾಸ ನಡೆಸಿದೆವು. ಮಾರನೆಯ ನಾವು ಮೂರು ಪಂದ್ಯಗಳನ್ನಾಡಲು ತಯಾರಾಗಿದ್ದೆವು. ಆ ದಿನ ಎಲ್ಲರೂ ೪:೪೫ಕ್ಕೆ ಎದ್ದು ತಿಂಡಿಯನ್ನು ಬೇಗ ಮುಗಿಸಿ ತಕ್ಷಣ ಹೊರಟೆವು. ಅಂದು ನಾವು ಮೂರು ಪಂದ್ಯಗಳನ್ನಾಡಿದೆವು (೨೦ ಓವರ್, ೧೫ ಓವರ್, ೧೦ ಓವರ್). ಆದರೆ ದುರದೃಷ್ಟವಶಾತ್ ನಾವು ಮೂರೂ ಪಂದ್ಯಗಳನ್ನೂ ಸೋತೆವು. ಇದರಿಂದ ನಾವು ಅಪಾರವಾದ ಕಲಿಕೆ ಕಲಿತೆವು ಹಾಗೂ ಅಂತರಾಷ್ಟ್ರೀಯ ಕ್ರಿಕಟ್‌ನಲ್ಲಿ ಎದುರಾಳಿಗಳನ್ನು ಹೇಗೆ ಎದುರಿಸಬೇಕೆಂದು ಕಲಿತೆವು. ಒತ್ತಡದ ಪರಿಸ್ಥಿತಿಯಲ್ಲಿ ಹೇಗೆ ಆಟವಾಡಬೇಕೆಂದು ತಿಳಿದೆವು. ಅಂದು ರಾತ್ರಿ ೯:೩೦ಕ್ಕೆ ಎಲ್ಲರೂ ಹೋಟೆಲ್ಲಿಗೆ ಬಂದೆವು. 


ಹೋಟೆಲ್‌ನಲ್ಲಿ ಅಂದು ರಾತ್ರಿ ೧೦:೦೦ ಗಂಟೆಗೆ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು. ಅದರಲ್ಲಿ ಪ್ರತೀಕ್ ಎಂಬುವವನನ್ನು ಬೆಸ್ಟ್ ಬ್ಯಾಟ್ಸ್‌ಮನ್, ನನ್ನನ್ನು ಬೆಸ್ಟ್ ಬೌಲರ್, ಕನಿಷ್ಕಎಂಬುವವನನ್ನು ಅಪ್ ಕಮಿಂಗ್ ಕ್ರಿಕೆಟರ್ ಎಂದು ಆರಿಸಲಾಯಿತು. ಮರುದಿನ ನಾವು ಬೆಂಗಳೂರಿಗೆ ವಾಪಸ್ಸು ಬಂದೆವು. ಆರುದಿನಗಳ ಶ್ರೀಲಂಕಾ ಪ್ರವಾಸವು ನನ್ನ ಬದುಕಿನ ಒಂದು ಒಳ್ಳೆಯ ಅನುಭವವೆಂದು ಹೇಳಲು ಖುಶಿಯಾಗುತ್ತದೆ.

Thursday, May 19, 2011

ಅಂತೂ ಇಂತೂ ರಜ ಬಂತು !!


ಒಂದನೇ ದೊಡ್ಡ ಪರೀಕ್ಷೆ ಮುಗೀತು ಅಂತ ಇದ್ರೆ, ಎರಡನೆಯ ದೊಡ್ಡ ಪರೀಕ್ಷೆ ಶುರುವಾಯ್ತು. ಆ ತಿಂಗಳು ಪರೀಕ್ಷೆ ಬರತ್ತೆ ಅನ್ನೋ ಭಯ ಆದ್ರೆ, ಪರೀಕ್ಷೆ ಮುಗಿದಾದ್ಮೇಲೆ ರಜಾ ಬರತ್ತೆ ಅನ್ನೋ ಖುಷಿ. ಆದರೂ ಪರೀಕ್ಷೇನಾ ಹೇಗೋ ಮುಗಿಸಿದೆ. ರಜಾ ಶುರುವಾಯ್ತು, ಖುಷಿನೂ ಆಯಿತು. ಆದ್ರೆ ಫಲಿತಾಂಶ ಏನು ಬರತ್ತೆ ಅನ್ನೋ ಭಯ ಶುರುವಾಯ್ತು.ಅಂತೂ ಭಯದಿಂದಲೇ ಫಲಿತಾಂಶ ನೋಡಕ್ಕೆ ಹೋದೆ. ಫಲಿತಾಂಶನ ನೋಡಿ ತುಂಬ ಖುಷಿಯಾಯ್ತು. ಯಾಕಂದ್ರೆ ನಾನು ಕ್ಲಾಸಿಗೆ ಮೊದಲನೆಯವನಾಗಿ ಬಂದಿದ್ದೆ. ನಾನು ಕ್ಲಾಸಿಗೆ ಮೊದಲಿಗನಾಗಿ ಬಂದಿದ್ದು ಇದು ೫ನೇ ಬಾರಿ.ಅಂದ್ರು ನಂಗೆ ಭಯ ಆಗ್ತಿದ್ದದ್ದು, ಈ ಬಾರಿ ನಾನು ಕ್ಲಾಸಿಗೆ ಮೊದಲನೆಯವನಾಗಿ ಬರ್ತಿನೋ ಇಲ್ವೋ ಅಂತ. ರಜಾ ಹತ್ತೇದಿನಕ್ಕೆ ಬೇಜಾರಾಗಕ್ಕೆ ಶುರುವಾಯ್ತು. ಹೆಂಗೆ ಕಾಲ ಕಳಿಯೋದು ಅಂತ ಅಂದ್ಕೊತಿದ್ದಾಗ 2ವರ್ಷದಿಂದ ಹೋಗ್ತಿದ್ದ ಕ್ರಿಕೆಟ್ ಕ್ಯಾಂಪ್ ನೆನಪಾಯ್ತು. ಕೊನೆಗೆ ಸೇರ್ಕೊಂಡೆ. ಈಗ್ಲೂ ಹಾಗೆ ಕಾಲ ಕಳಿತಿದ್ದೀನಿ.ಇನ್ನು ಹದಿನೈದು ದಿನಕ್ಕೆ ಸ್ಕೂಲ್ ಶುರುವಾಗುತ್ತೆ ಅಂತ ತುಂಬ ಖುಷಿಯಾಗ್ತಿದೆ.